“ಈ ಸೊಳ್ಳೆ ಬೇಕಾದ್ರೇ ಒಂದು ಡ್ರಾಪ್ ರಕ್ತ ಕುಡಿದುಕೊಂಡು ಹೋಗ್ಲಿ ಒಂಚೂರು ಬೇಜಾರ್ ಇಲ್ಲ ಮಾರಾಯ ಆದ್ರೆ ಈ ಸೊಳ್ಳೆ ಕಚ್ಚಿದಾಗ ಆಗೋ ಕೆರೆತ ಏಳೋ ಗುಳ್ಳೆ ಮಾತ್ರ ಸಹಿಸೋಕಾಗಲ್ಲ ..”

ಸೊಳ್ಳೆ ಹತ್ರ ಕಚ್ಚಿಸಿಕೊಂಡೋರಿಗೆ ಅಲ್ಲಲ್ಲಾ…. ಚುಚ್ಚಿಸಿಕೊಂಡ ಬಹುತೇಕರ ಬಾಯಲ್ಲಿ ಬರುವ ಮಾತುಗಳಿವು. ಹಾಗಾದರೆ ಸೊಳ್ಳೆ ಕಚ್ಚಿದರೆ ನವೆಯಾಗುವುದು ಏಕೆಂದರೆ , ಸೊಳ್ಳೆಗಳು ನಮ್ಮ ಚರ್ಮದ ಲ್ಯಾಕ್ಟಿಕ್ ಆ್ಯಸಿಡ್ ಹೆಚ್ಚಿರುವ ಪ್ರದೇಶದಲ್ಲಿ ಕುಳಿತು ತನ್ನ ಚೂಪಾದ ಸೂಜಿಯಂತಹ ರಚನೆಯನ್ನು ಚರ್ಮದ ಒಳಗೆ ತೂರಿಸುತ್ತವೆ. ಈ ರೀತಿಯ ಎರಡು ಕೊಳವೆಗಳಿದ್ದು ಒಂದು ಕೊಳವೆಯಲ್ಲಿ ರಕ್ತವನ್ನು ಹೀರುತ್ತಾ ಮತ್ತೊಂದು ಕೊಳವೆಯಲ್ಲಿ ಸಲೈವಾ ವನ್ನು ಮನುಷ್ಯನ ದೇಹದ ಒಳಗೆ ತೂರಿಸುತ್ತಾ ಹೋಗುತ್ತದೆ. ಈ ಸಲೈವಾ ರಕ್ತ ಹೆಪ್ಪುಗಟ್ಟದಂತೆ ತಡೆಗಟ್ಟುತ್ತವೆ.


ಈ ರೀತಿ ದೇಹದ ಒಳಗೆ ಸೇರಿದ ಸಲೈವಾ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಎಚ್ಚರಿಸುತ್ತದೆ . ಆಗ ದೇಹದ ಒಳ ಹೊಕ್ಕ ಸೊಳ್ಳೆಯ ಸಲೈವಾದ ವಿರುದ್ಧ ಪ್ರತಿಕಾಯಗಳು (Antibodies) ರೂಪುಗೊಳ್ಳುತ್ತವೆ. ಪ್ರತಿಜನಕವಾದ (Antigen) ಸಲೈವಾವನ್ನು ಸುತ್ತುವರೆಯುುವ ಪ್ರತಿಕಾಯಗಳು ಸಲೈವಾವನ್ನು ನಾಶಗೊಳಿಸುತ್ತವೆ. ಈ ಸಂದರ್ಭದಲ್ಲಿ ಸೊಳ್ಳೆ ಕಚ್ಚಿದ ಪ್ರದೇಶದಲ್ಲಿ ಉಂಟಾಗುವ ರಾಸಾಯನಿಕ ಮತ್ತು ಜೈವಿಕ ಬದಲಾವಣೆಗಳು ನಮಗೆ ಕೆರೆತದ ಅನುಭವ ನೀಡುತ್ತದೆ.


ಸೊಳ್ಳೆಗಳು ಕೇವಲ ಕೆರೆತ ಮತ್ತು‌ ಸದ್ದಿನ ಮೂಲಕ ಮಾನವನಿಗೆ ಕಿರಿಕಿರಿ ಮಾಡದೇ ತಾನು ಹರಡುವ ಖಾಯಿಲೆಗಳಿಂದಲೂ ಕುಖ್ಯಾತವಾಗಿವೆ. ಡೇಂಘೀ , ಚಿಕೂನ್ ಗುನ್ಯಾ , ಮಲೇರಿಯಾ ಮುಂತಾದ ಖಾಯಿಲೆಗಳನ್ನು ಸೊಳ್ಳೆಗಳು ಹರಡುವುದರಿಂದ ಸಾಧ್ಯವಾದಷ್ಟು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿ. ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ನೀರು‌ನಿಲ್ಲದಂತೆ ನೋಡಿಕೊಳ್ಳಿ ಮತ್ತು ಸೊಳ್ಳೆಗಳ ಲಾರ್ವಾಗಳನ್ನು ಭಕ್ಷಿಸುವ ಗಪ್ಪಿ ಮೀನುಗಳನ್ನು ನೀರಿನ ಮೂಲಗಳಲ್ಲಿ ಬಿಡಿ.

LEAVE A REPLY

Please enter your comment!
Please enter your name here